ಶನಿವಾರ, ಜುಲೈ 2, 2016

ಬಹದ್ದೂರ್ ಗಂಡು


  ಬಹದ್ದೂರ್ ಗಂಡು ಚಿತ್ರ ಕಥೆಯಲ್ಲಾಗಲಿ, ಆ ಚಿತ್ರದಲ್ಲಿ ನಟಿಸಿದ ನಟರಲ್ಲಾಗಲಿ, ಯಾವುದೇ ವಿಷಯವನ್ನ ತೆಗೆದುಕೊಂಡ್ರು ಬದಲಾವಣೆಯನ್ನ ಬಯಸಿದ ಕನ್ನಡ ಸಿನಿ ಪ್ರಿಯನಿಗೆ ಇಷ್ಟವಾಗುವ ರೀತಿಯಲ್ಲಿ ಮೂಡಬಂದಿತ್ತು. ರಾಜ ಸಂಸ್ಥಾನ ಮತ್ತು ಪ್ರಜೆಗಳ ನಡುವಿನ ಸಮರಸದ ಭಾವನೆಯನ್ನು ಮೂಡುವ ಮನಂರಜನೆ, ಪ್ರೀತಿ, ಪ್ರೇಮ, ಮತ್ತು ಹಾಸ್ಯವನ್ನ ಈ ಚಿತ್ರದಲ್ಲಿ ಕಾಣಬಹುದು.
  ಬಹದ್ದೂರ್ ಗಂಡು ಚಿತ್ರದಲ್ಲಿ ದೊಡ್ಡ ತಾರಾಬಳಗದ ದಂಡೇ ಇದೆ. ರಾಜ್ ಕುಮಾರ್ ಜೊತೆಗೆ ಆರತಿ ಮತ್ತು ಜಯಂತಿ ನಾಯಕಿಯಾಗಿ ಕಾಣಿಸಿಕೊಂಡ್ರೆ, ಖಳ ನಟನಾಗಿ ವಜ್ರಮುನಿ ಎಲ್ಲರ ಮಾತುಗಳಲ್ಲಿ ಹರಿದಾಡುವಂತೆ ಮಾಡಿದ್ದಾರೆ. ಪೋಷಕನ ಪಾತ್ರದಲ್ಲಿ ಬಾಲಕೃಷ್ಣನ ಅಭಿನಯ ಎಂತಹವರು ನೆನಪು ಮಾಡಿಕೊಳ್ಳುವಂತೆ ಮಾಡುತ್ತೆ. ಉಳಿದಂತೆ ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ರಾಜಶಂಕರ್ ಅಭಿನಯ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.
  ಆಗ ಚಿತ್ರಗಳಿಗೆ ಸಂಗೀತ ನೀಡುವುದರಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಎಂ. ರಂಗರಾಜನ್  ಬಹದ್ದೂರ್ ಗಂಡು ಚಿತ್ರಕ್ಕೆ ಕೂಡ ಸಂಗೀತ ನೀಡಿದ್ರು. ಈ ಚಿತ್ರದ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದವರು ಚಿ. ಉದಯಶಂಕರ್, ಚಿತ್ರ ಸಾಹಿತ್ಯ ಬರೆಯುವುದರಲ್ಲಿ ಎತ್ತಿದ ಕೈ ಆಗಿದ್ದ ಇವರಿಗೆ ಹೆಚ್ಚು ಹೇಳಲೇ ಬೇಕಿಲ್ಲ. ಪಿ.ಬಿ ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ರಾಜ್ ಕುಮಾರ್ ಕೂಡ ಚಿತ್ರದಲ್ಲಿ ಹಾಡಿಗೆ ದ್ವನಿ ನೀಡಿದ್ದಾರೆ.
  ಒಂದು ಚಿತ್ರ ಅಚ್ಚು ಕಟ್ಟಾಗಿ, ಸುಂದರವಾಗಿ ಮೂಡಿಬರಬೇಕಾದರೆ, ಛಾಯಾಗ್ರಹಣದ ಕೈ ಚಳಕ ತುಂಬಾನೇ ಮುಖ್ಯವಾಗಿರುತ್ತೆ, ಈ ಚಿತ್ರಕ್ಕಾಗಿ ಕೈಯಲ್ಲಿ ಕ್ಯಾಮರ ಹಿಡಿದವರು ಎಸ್.ವಿ ಶ್ರೀಕಾಂತ್, ಇವರ ಸೃಜನಶೀಲ ಕ್ಯಾಮರ ವರ್ಕ್‍ನಿಂದ ಚಿತ್ರ ಅದ್ಬುತವಾಗಿ ಮೂಡಿಬಂದಿದೆ. ಕುದುರೆ ಸವಾರಿಯಲ್ಲಿನ ಸನ್ನಿವೇಶ, ನದಿ ದಾಟುವ ಸನ್ನಿವೇಶ ಮತ್ತು ಯುದ್ಧದ ಸನ್ನಿವೇಶಗಳು ಚಿತ್ರ ಯಶಸ್ಸಿಗೆ ಉದಾಹರಣೆಯ ಅಂಶಗಳು.
  ಬಹದ್ದೂರ್ ಗಂಡು ಚಿತ್ರ ನಿರ್ದೇಶನ ಮಾಡಿದವರು ಎ.ವಿ. ಶೇಷಗಿರಿ ರಾವ್, ಇವರ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ ಚಿ ಉದಯಶಂಕರ್. ಇಂತ ಚಿತ್ರಕ್ಕೆ ಬಂಡವಾಳವನ್ನ ಹೂಡಿದ್ದಾರೆ ಶ್ರೀ ಕಾಂತ್ ನಹತಾ. ಬಹದ್ದೂರ್ ಗಂಡು ಚಿತ್ರ 1952ರಲ್ಲಿ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ತೆರೆ ಕಂಡ ‘ಆನ್’ ಚಿತ್ರದಿಂದ ಸ್ಪೂರ್ತಿ ಪಡೆದ ಚಿತ್ರ, ಈ ಚಿತ್ರದಲ್ಲಿ ದಿಲೀಪ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಂಜುನಾಥ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ