ಮಂಗಳವಾರ, ಜೂನ್ 14, 2016

ಬಣ್ಣದ ಗೆಜ್ಜೆ


  ಇಂಪಾದ ಸಂಗೀತ, ಕಣ್ಣಿಗೆ ಮುದನೀಡುವಂತ ನೃತ್ಯ, ಸುಂದರ ಪ್ರೇಮ ಕಥೆ, ತಾಯಿ ಮಗನ ಸೆಂಟಿಮೆಟ್, ಕಥೆ ಅಥವಾ ಚಿತ್ರ ಕಥೆಯಲ್ಲಾಗಲಿ ಸೋಲಪ್ಪದ ನಿರ್ದೇಶಕರು, ಕ್ಯಾಮರ ಕಣ್ಣಿಂದ ಸೆರೆಯಾದ ಅದ್ಬುತ ದೃಶ್ಯಗಳು ಒಂದಕ್ಕಿಂತ ಮತ್ತೊಂದು ಹೆಚ್ಚು ಎನ್ನುವಂತೆ ಮೂಡಿ ಬಂದಿದೆ ಈ ಚಿತ್ರದಲ್ಲಿ. ಇಷ್ಟೆಲ್ಲಾ ಹೇಳಿದ ಮೇಲೆ ಯಾವುದು ಆ ಚಿತ್ರ ಅಂತ ನಿಮ್ಮ ತಲೆಯಲ್ಲಿ ಗಿರಕಿ ಹೊಡೆಯುತ್ತಿರಬಹುದು. ಅದೇ ‘ಬಣ್ಣದ ಗೆಜ್ಜೆ’.
  ಹೌದು ನಾನು ಬಣ್ಣದ ಗೆಜ್ಜೆ ಚಿತ್ರದ ಬಗ್ಗೆ ಮಾತನಾಡುತ್ತಾ ಇದ್ದಿನಿ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನವ ನಟಿಯಾಗಿದ್ದ ‘ಅಮಲ’ ಜೋಡಿಯಾಗಿದ್ದರು. ಹಿರಿಯ ನಟಿ ಭಾರತಿ, ಒಂದು ಕಾಲದಲ್ಲಿ ಕನ್ನಡ ಚಿತ್ರ ರಂಗದಲ್ಲಿ ಹೆಸರು ಮಾಡಿದ್ದ ಕಲ್ಯಾಣ್ ಕುಮಾರ್ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಉಳಿದಂತೆ ಸುರೇಶ್ ಹೆಬ್ಲಿಕರ್, ಅಮಜದ್ ಖಾನ್ ನಟರ ಜೊತೆಗೆ ದೇವರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
  ಬಣ್ಣದ ಗೆಜ್ಜೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಈ ಚಿತ್ರವನ್ನ ನಿರ್ದೇಶನ ಮಾಡಿರೋರು ರಾಜೇಂದ್ರ ಸಿಂಗ್ ಬಾಬು, ಕಥೆ ಚಿತ್ರ ಕಥೆಯನ್ನು ಮಾಡುವುದರ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನು ಕೂಡ ಇವರೇ ಹೂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಉತ್ತಮ ಕಥೆಯನ್ನು ಹೆಣೆಯುವರಲ್ಲಿ ಸಿದ್ದ ಹಸ್ತರು. ಅವರ ಕ್ರಿಯೇಟಿವಿಟಿ ಬಣ್ಣದ ಗೆಜ್ಜೆ ಸಿನಿಮಾದಲ್ಲಿ ನೋಡಬಹುದು. ಈ ಚಿತ್ರದ ಈ ಹಾಡು ಅವರೊಬ್ಬ ಉತ್ತಮ ನಿರ್ದೇಶಕ ಅನ್ನೋದನ್ನ ತಿಳಿಸುತ್ತೆ.
  ನಾದ ಬ್ರಹ್ಮ ಹಂಸಲೇಖ ಬಣ್ಣದ ಗೆಜ್ಜೆ ಸಿನಿಮಾಗೆ ಇಂಪಾದ ಸಂಗೀತವನ್ನ ನೀಡಿದ್ದಾರೆ. ಸ್ವಾತಿ, ಮುತ್ತಿನ ಮಳೆ ಹನಿಯೇ, ಪ್ರೇಮಾ ಗೀಮಾ ಜಾನೆ ತೋ, ಮೊದಲಾದ ಹಾಡುಗಳು ಸಂಗೀತ ಪ್ರಿಯರ ಬಾಯಲ್ಲಿ ಹರಿದಾಡಿದ್ದಂತೂ ನಿಜ. ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ ಹಂಸಲೇಖ, ಚಿತ್ರದ ಎಲ್ಲಾ ಹಾಡುಗಳಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ದ್ವನಿ ನೀಡಿದ್ದಾರೆ. ಒಂದು ಹಾಡಿಗೆ ಲತಾ ಹಂಸಲೇಖ ತಮ್ಮ ದ್ವನಿ ನೀಡಿದ್ದಾರೆ. 
  ಬಣ್ಣದ ಗೆಜ್ಜೆ ಚಿತ್ರವನ್ನ ಸುಂದರವಾಗಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುವಂತೆ ಮಾಡಿದ್ದಾರೆ ಪಿ.ಎಸ್. ಪ್ರಕಾಶ್, ಮತ್ತು ಸಂಕಲನದ ಜವಾಬ್ದಾರಿಯನ್ನ ಹೊತ್ತಿದ್ದು ಗೌತಮ್ ರಾಜು. ಬಣ್ಣದ ಗೆಜ್ಜೆ ಚಿತ್ರ ಏಕ ಕಾಲದಲ್ಲಿ ತೆಲುಗು ಭಾಷೆಯಲ್ಲೂ ಕೂಡ ತೆರೆ ಕಂಡಿತ್ತು, ಬಹುತೇಕ ಬಣ್ಣದ ಗೆಜ್ಜೆ ಚಿತ್ರ ತಂಡವೇ ಈ ಚಿತ್ರದಲ್ಲಿ ಕೆಲಸ ಮಾಡಿತ್ತು. ಪ್ರೇಮ ಯುದ್ಧಂ ಹೆಸರಿನಲ್ಲಿ ತೆರೆಕಂಡ ಈ ಚಿತ್ರಕ್ಕೆ ನಾಗಾರ್ಜುನ್ ನಾಯಕ ನಟನಾಗಿ ಅಭಿನಯಿದ್ದರು. ಬಣ್ಣದ ಗೆಜ್ಜ ಚಿತ್ರ ಒಂದು ಸುಮಧುರವಾದ ಪ್ರೇಮ ಕಥೆ ಮತ್ತು ಇಂಪಾದ ಸಂಗೀತದ ಮಾಲೆ. ಇಂಥ ಚಿತ್ರ ಒಂದು ಹೊಸ ರೀತಿಯ ಅನುಭವವನ್ನು ನೀಡುತ್ತೆ. ಬಣ್ಣದ ಗೆಜ್ಜೆ.

ಮಂಜುನಾಥ್ ಹೆಚ್.ಆರ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ